ವೀಣೆಶೇಷಣ್ಣ
1852-1946. ಖ್ಯಾತ ವೈಣಿಕರು. ಶ್ರೇಷ್ಠ ವಾಗ್ಗೇಯ ಕಾರರು. ಪ್ರಖ್ಯಾತ ವೈಣಿಕರಾಗಿದ್ದ ತಂಜಾವೂರಿನ ಆದಿ ಅಪ್ಪಯ್ಯ 
ಇವರ ಪೂರ್ವಜರು. ತಂದೆ ಚಿಕ್ಕರಾಮಪ್ಪನವರೂ ವೀಣಾ ವಿದ್ವಾಂಸರು; ಧಾರಾ ನೆಲ್ಲೂರು ಪ್ರಾಂತದಿಂದ ಮೈಸೂರಿಗೆ ವಲಸೆ ಬಂದು, ಮಹಾ ರಾಜರ ಆಶ್ರಯದಲ್ಲಿ ಅರಮನೆಯ ಸಂಗೀತ ಇಲಾಖೆಯ ಭಕ್ಷಿಯಾಗಿದ್ದರು.  ಇವರು 1852ರಲ್ಲಿ ಜನಿಸಿದರು. ಬಾಲ್ಯದಲ್ಲಿದ್ದಾಗಲೇ ಅಸಾಧಾರಣ ಸ್ವರಲಯವಿತ್ತು. ಹತ್ತನೆಯ ವಯಸ್ಸಿನಲ್ಲಿ ರಾಜ ಸಮ್ಮುಖದಲ್ಲಿ ಹಾಡುಗಾ ರಿಕೆಯಿಂದ ಸನ್ಮಾನಿತರಾದರು. ಹದಿನಾರನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಮೇಲೆ ವೀಣಾ ಸುಬ್ಬಣ್ಣನವರ ತಂದೆ ದೊಡ್ಡ ಶೇಷಣ್ಣ ಹಾಗೂ ಇನ್ನೊಬ್ಬ ವಿದ್ವಾಂಸ ಸದಾಶಿವರಾಯರಲ್ಲಿ ತಮ್ಮ ಸಾಧನೆಯಿಂದ ಸಂಗೀತಶಿಕ್ಷಣ ಮುಂದುವರಿಸಿದರು. ತಮ್ಮ ಸಮರ್ಥ ಸಾಧನೆಯಿಂದ ವಿದ್ವತ್ತನ್ನು ಬಲುಬೇಗ ಗಳಿಸಿ, ಇಪ್ಪತ್ತಾರನೆಯ ವಯಸ್ಸಿನಲ್ಲಿ ಆಸೇತುಹಿ ಮಾಚಲ ಪರ್ಯಟನ ಮಾಡಿದರು. ತಮ್ಮ ಪಾಂಡಿತ್ಯ ಹಾಗೂ ಪ್ರತಿಭೆಗ ಳಿಂದ ಪ್ರಖ್ಯಾತ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದರು. ರಾಮನಾಡ್, ಬರೋಡ ದೊರೆಗಳಾದಿಯಾಗಿ ಹಲವರಿಂದ ಇವರು ಪಡೆದ ಸನ್ಮಾನ ಹಾಗೂ ಖಿಲ್ಲತ್ತುಗಳು ಅಪಾರ. ಚಾಮರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರು ಇವರಿಗೆ ವೈಣಿಕಶಿ ರೋಮಣಿ ಎಂಬ ಬಿರುದಿತ್ತು ಗೌರವಿಸಿದ್ದರು. ಫಿಡಲ್, ಜಲತರಂಗ್, ಪಿಯಾನೊ, ಸ್ವರಬತ್ ಮುಂತಾದ 14 ವಾದ್ಯಗಳ ನುಡಿಸುವಿಕೆಯಲ್ಲಿಯೂ ಇವರಿಗೆ ಪರಿಶ್ರಮವಿತ್ತು. ಮೈಸೂರಿನಲ್ಲಿ ಕೃಷ್ಣೋತ್ಸವದಂಥ ಸಂಗೀತ ಸಭೆಗಳನ್ನು ಆರಂಭಿಸಿದ ಕೀರ್ತಿ ಇವರದು. ಇವರು 1946ರಲ್ಲಿ ನಿಧನರಾದರು.

	ಇವರ ವೀಣಾವಾದನದ ವೈಶಿಷ್ಟ್ಯವೆಂದರೆ ರಾಗ, ಭಾವಮಾಧುರ್ಯ, ಪಲ್ಲವಿ ನೆರವಲ್, ಮನೋಧರ್ಮ ಸ್ವರಕಲ್ಪನೆ, ಅಪೂರ್ವ ಸಂಚಾರಗಳು, ದಾಟು ಸ್ವರಗಳು, ತಂತಿಗಳ ಕಪಟವಿಲ್ಲದ ಮೃದುಮಧುರವಾದ ಮಾರ್ದವತೆಯಿಂದ ಕೂಡಿದ ಮೀಟು. ರಾಗಾಲಾಪನೆ ಮತ್ತು ಸ್ವರಕಲ್ಪನೆ ಮಾಡುವಾಗ ದಾಟು ಸ್ವರಗಳನ್ನು ಪ್ರಯೋಗಿಸಿ ಮನರಂಜನೆ ಮಾಡುತ್ತಿದ್ದ ವರಲ್ಲಿ ಇವರೇ ಮೊದಲಿಗರು.

	ಇವರು ಶ್ರೇಷ್ಠ ವಾಗ್ಗೇಯಕಾರರೂ ಆಗಿದ್ದರು. ಹನ್ನೊಂದು ಸ್ವರ ಜತಿಗಳು, ಏಳು ವರ್ಣಗಳು, ಎರಡು ರಾಗಮಾಲಿಕಾ, ಹನ್ನೊಂದು ತೆಲುಗು ಕೃತಿಗಳು, ಐದು ಕನ್ನಡ ಕೃತಿಗಳು ಮತ್ತು ಹದಿನೇಳು ತಿಲ್ಲಾನಗಳನ್ನು ರಚಿಸಿ ಸಂಗೀತ ಸರಸ್ವತಿಯ ಭಂಡಾರವನ್ನು ಹೆಚ್ಚಿಸಿದ್ದಾರೆ. ಇವರಿಗೆ ಶಿಷ್ಯರು ಅನೇಕ. ಅವರಲ್ಲಿ ವೀಣೆ ವೆಂಕಟಗಿರಿಯಪ್ಪ, ಕಲಾವಿದ ವೆಂಕಟಪ್ಪ, ಶಮಾದೇವಿ ಸುಬ್ರಹ್ಮಣ್ಯಶಾಸ್ತ್ರಿ, ನಾರಾಯಣಯ್ಯರ್, ಮೊಮ್ಮಕ್ಕಳಾದ ಸ್ವರಮೂರ್ತಿ ವೆಂಕಟನಾರಾಯಣರಾವ್ ಮತ್ತು ಎ.ಎಸ್. ಚಂದ್ರಶೇಖರಯ್ಯ ಮುಖ್ಯರು.	
											(ವಿ.ಎಸ್.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ